ಪರಿಚಯ

ಪರಿಚಯ

ವಿದುಷಿ ಡಾ.ಗೀತಾ ಸೀತಾರಾಮ್‍ರವರು 19ನೇ ಜುಲೈ 1953ರಲ್ಲಿ ಮೈಸೂರಿನಲ್ಲಿ ಜನಿಸಿದವರು. ಮೇಲುಕೋಟೆಯ ಶ್ರೀ ಕಲ್‍ಬಾಗಲ್ ನರಸಿಂಹ ಅಯ್ಯಂಗಾರ್ ಮತ್ತು ಮೈಸೂರಿನ ಶ್ರೀಮತಿ ಜಯಾ ಕಲ್‍ಬಾಗಲ್‍ರವರ ಪುತ್ರಿ.

ಡಾ.ಗೀತಾ ಮನಶ್ಶಾಸ್ತ್ರದಲ್ಲಿ ಎಂ.ಎ. ಮತ್ತು ಗ್ರಂಥಾಲಯ ಶಾಸ್ತ್ರದಲ್ಲಿ ಪಿಹೆಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯಲ್ಲಿ ಇವರು ವಿದ್ವತ್ ಪದವಿಯನ್ನು ಪಡೆದಿದ್ದಾರೆ.

ಡಾ.ಗೀತಾ ಸೀತಾರಾಮ್‍ರವರು 1978ರಿಂದ ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ಗ್ರಂಥವಿಜ್ಞಾನಿಯಾಗಿ ಸೇವೆ ಸಲ್ಲಿಸಿ, ಮುಖ್ಯ ಗ್ರಂಥಾಧಿಕಾರಿಯಾಗಿ ಹಾಗೂ ಸಂಸ್ಥೆಯ ಉಪನಿರ್ದೇಶಕಿಯಾಗಿ ನಿವೃತ್ತಿ ಹೊಂದಿದರು. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ಭಕ್ತಿ ಸಂಗೀತದ ಆರು ತಿಂಗಳ ಅವಧಿಯ ‘ಸರ್ಟಿಫಿಕೇಟ್ ಕೋರ್ಸ್ಗೆ’ ಉಪನ್ಯಾಸಕಿ ಆಗಿದ್ದಾರೆ.

ಮೈಸೂರಿನ ಖ್ಯಾತ ಕರ್ನಾಟಕ ಸಂಗೀತದ ವಾಗ್ಗೇಯಕಾರ್ತಿಯಾಗಿರುವ ಡಾ.ಗೀತಾ ನೂರೊಂದು ಸಂಗೀತ/ನೃತ್ಯ ರಚನೆಗಳನ್ನು ರಚಿಸಿದ್ದಾರೆ. ಅವುಗಳನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ‘ನಾದ ನುಡಿ ಸೌರಭ’ ಎಂಬ ಪುಸ್ತಕವಾಗಿ ಪ್ರಕಟಿಸಿದೆ. ಗೀತಸಿಂಧು, ಗೀತಮಾಧುರಿ, ಗೀತರಶ್ಮಿ, ಧನ್ಯ-ಹಿರಣ್ಮಯಿ-ಲಕ್ಷ್ಮಿ, ವಂದನೆ-ಅಭಿವಂದನೆ ಎಂಬ ಐದು ಧ್ವನಿಸುರುಳಿಗಳಲ್ಲಿ ಈ ರಚನೆಗಳನ್ನು ಸ್ವತಃ ಹಾಡಿ ಕೊಟ್ಟಿದ್ದಾರೆ. ದೀಪದರ್ಶಿನಿ, ಜಯಸಿಂಹ, ದಯಾದ್ಯುತಿ, ಶಾಂತಿಬ್ರಹ್ಮ, ಸಚ್ಚಿದ್ರೂಪ ಮತ್ತು ಶಿವದೀಪ್ತಿಯೆಂಬ ಆರು ಹೊಸರಾಗಗಳನ್ನು ಕೊಡುಗೆ ನೀಡಿದ್ದಾರೆ. ಪಿಟೀಲು ಚೌಡಯ್ಯ, ಸ್ವಾತಿ ತಿರುನಾಳ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಕುರಿತಾದ ಮೂರು ನಾಟಕಗಳನ್ನು ರಚಿಸಿದ್ದಾರೆ.

‘ಗೀತಾಂಜಲಿ ಸ್ಕೂಲ್ ಆಫ್ ಫೈನ್ ಆರ್ಟ್ನ’ ನಿರ್ದೇಶಕಿಯಾಗಿ ಕಳೆದ ನಲವತ್ತು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶಿಷ್ಯೆಯರನ್ನು ತಯಾರು ಮಾಡುತ್ತಿದ್ದಾರೆ. ಅವರ ಶಾಲೆಯ ಶಾಖೆಗಳು ಅಮೆರಿಕದಲ್ಲೂ ಇವೆ. ಡಾ.ಗೀತಾರವರು ಯೂರೋಪ್ ಹಾಗೂ ಅಮೆರಿಕದಲ್ಲಿ ಸಂಗೀತ ಕಛೇರಿಗಳನ್ನೂ, ಕಾರ್ಯಾಗಾರಗಳನ್ನೂ ನಡೆಸಿದ್ದಾರೆ.

ಡಾ. ಗೀತಾ ಸೀತಾರಾಮ್ ರವರು ಖ್ಯಾತ ಕನ್ನಡ ಲೇಖಕಿ ಕೂಡ. ಅವರು ೧೦ ಕಾದಂಬರಿಗಳು, ೪ ಕಥಾಸಂಕಲನಗಳು, ೬ ನಾಟಕಗಳು, ೨ ಸಂಪಾದಿತ ಕೃತಿಗಳು, ೧ ಪ್ರವಾಸ ಕಥನ, ೧ ವಿಮರ್ಶಾತ್ಮಕ ಪ್ರಭಂದ, ೨ ಶಿಶು ಸಾಹಿತ್ಯಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಮೂರು ಅನುವಾದಗಳೂ ಸೇರಿವೆ. ಟಿ. ಪಿ. ಕೈಲಾಸಂ ರವರ ಆಂಗ್ಲ ನಾಟಕ “ದಿ ಬ್ರಾಹ್ಮಿನ್ಸ್ ಕರ್ಸ್”ನ ಕನ್ನಡ ಅನುವಾದ “ಶಾಪ”, ಕಲ್ಕಿ ಕೃಷ್ಣಮೂರ್ತಿಯವರ ತಮಿಳು ಐತಿಹಾಸಿಕ ಕಾದಂಬರಿ “ಪಾರ್ತಿಬನ್ ಕನವು”ನ ಕನ್ನಡ ಅನುವಾದ “ಕನಸು ಕಂಡ ಚೋಳರಸ ಪಾರ್ತಿಬ” ಮತ್ತು ಚಾ. ವಿಶ್ವನಾಥನ್ ರವರ ತಮಿಳು ಹಾಸ್ಯ ಕಾದಂಬರಿ “ವಾಷಿಂಗ್ಟನ್ನಿಲ್ ತಿರುಮಣಂ”ನ ಕನ್ನಡ ಅನುವಾದ “ವಾಷಿಂಗ್ಟನ್ನಲ್ಲಿ ವಿವಾಹ”.

ಡಾ.ಗೀತಾರವರು ಯೋಗಶ್ರೀ ಡಾ.ಏ.ಆರ್.ಸೀತಾರಾಮ್‍ರವರನ್ನು ವಿವಾಹವಾಗಿದ್ದಾರೆ. ಇವರ ಪತಿ ಖ್ಯಾತ ನೈತಿಕ ಶಿಕ್ಷಣ ತಜ್ಞ ಮತ್ತು ಯೋಗ ಚಿಕಿತ್ಸಕರಾಗಿದ್ದು, ಮೈಸೂರಿನ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರೂ, ತಮಿಳುನಾಡಿನ ಉಳಂದೂರ್ ಪೇಟೆಯ ಶಾರದಾ ಕಾಲೇಜ್ ಆಫ್ ಎಜುಕೇಷನ್‍ನ ನಿವೃತ್ತ ಪ್ರಾಂಶುಪಾಲರೂ, ಪ್ರಸ್ತುತ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಭಾಗದ ಆಹ್ವಾನಿತ ಉಪನ್ಯಾಸಕರೂ, ಪರಮಹಂಸ ಯೋಗ ಚಿಕಿತ್ಸಾ ಮತ್ತು ಸಲಹಾ ಕೇಂದ್ರದ ಸ್ಥಾಪಕ ನಿರ್ದೇಶಕರೂ ಆಗಿದ್ದಾರೆ. ಡಾ.ಗೀತಾ ಸೀತಾರಾಮ್‍ರವರ ಇಬ್ಬರು ಪುತ್ರರು ದೀಪಕ್‍ ರಾಮ್ ಮತ್ತು ದರ್ಶನ್‍ ರಾಮ್ ಯೂರೋಪ್‍ನಲ್ಲಿ ಎಂಜಿನಿಯರ್‍ಗಳಾಗಿದ್ದಾರೆ.