ಪ್ರಕಟಣೆಗಳು

ಪ್ರಕಟಣೆಗಳು

ಸಂಗೀತಾತ್ಮಕ ಪ್ರಕಟಣೆಗಳು

ನೂಪುರ (1993): ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ‘ನೂಪುರ’ ಪುಸ್ತಕ ಡಾ. ಗೀತಾ ಸೀತಾರಾಮ್ ರವರ ಪ್ರಥಮ ನೃತ್ಯಗೀತೆಗಳ ಸಂಕಲನ. ಇದರಲ್ಲಿ ಅನೇಕ ಸಂಗೀತ ಪ್ರಕಾರಗಳ ಇಪ್ಪತ್ತು ರಚನೆಗಳಿವೆ. (ಸ್ತುತಿಶ್ಲೋಕ, ಸ್ವರಜತಿ, ಶಬ್ದಂ, ಕೃತಿ, ಪದವರ್ಣ, ಜಾವಳಿ, ಕೀರ್ತನೆ, ಪದಂ, ತಿಲ್ಲಾನ) ರಚನೆಗಳು ಸಂಸ್ಕೃತ, ಕನ್ನಡ, ತಮಿಳು, ಹಿಂದಿ ಭಾಷೆಗಳಲ್ಲಿವೆ.

ನಾದನುಡಿ ಸೌರಭ (2015): ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಪ್ರಕಟಿಸಿರುವ ‘ನಾದನುಡಿ ಸೌರಭ’ ಪುಸ್ತಕ ಡಾ. ಗೀತಾ ಸೀತಾರಾಮ್ ರವರ 101 ಸ್ವಂತ ಸಂಗೀತ ರಚನೆಗಳ ಸಂಕಲನ. ಇದರಲ್ಲಿ ಅನೇಕ ಸಂಗೀತ ಪ್ರಕಾರದ ರಚನೆಗಳಿವೆ. (ಸ್ತುತಿ, ಶ್ಲೋಕ, ಸ್ವರಜತಿ, ಶಬ್ದಂ, ತಾನವರ್ಣ, ವರ್ಣದರು, ಪದವರ್ಣ, ಕೃತಿ, ಕೀರ್ತನೆ, ಭಾವಗೀತೆ, ಪದಂ, ಜಾವಳಿ, ಅಷ್ಟಪದಿ, ವಚನ, ಭಜನ, ತಿಲ್ಲಾನ, ಉಗಾಬೋಗ, ಮಂಗಳ) ರಚನೆಗಳು, ಸಂಸ್ಕೃತ, ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿವೆ.

ಗೀತಸಿಂಧು (1998): ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ಗೀತಸಿಂಧು, ದ್ವಂದ್ವ ಧ್ವನಿಸುರುಳಿಗಳು ಡಾ. ಗೀತಾ ಸೀತಾರಾಮ್ ರವರ 24 ಸ್ವಂತ ಸಂಗೀತ ರಚನೆಗಳನ್ನೊಳಗೊಂಡಿವೆ. ಇದರ ಮುಖ್ಯಾಂಶಗಳು-‘ಆನಂದ ನಟನ’ ಪದವರ್ಣ, ನಾಗಸ್ವರಾವಳಿ ರಾಗದಲ್ಲಿದ್ದು, ವಿವಿಧ ನಡೆಗಳಲ್ಲಿವೆ; ದಶಾವತಾರ ರಾಗ/ತಾಳ ಮಾಲಿಕೆ; ಕಲ್ಯಾಣ ವಸಂತದ ರಾಮಾಯಣದ ಪದವರ್ಣ; ಕೃಷ್ಣನನ್ನು ಕುರಿತಾದ ಅಮೃತವರ್ಷಿಣಿಯ ಪದವರ್ಣ ಹಾಗೂ ಭೈರವಿ ರಾಗದ ವರ್ಣದರು. ಇಲ್ಲಿನ ರಚನೆಗಳು ಸಂಸ್ಕೃತ, ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿವೆ. ಅವರ ಸ್ವಂತ ರಾಗ ದೀಪದರ್ಶಿನಿ ಕೃತಿ ಕೂಡ ಇಲ್ಲಿದೆ.

ಗೀತ ಮಾಧುರಿ (2004): ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ‘ಗೀತಮಾಧುರಿ’ ಧ್ವನಿಸುರುಳಿ ಡಾ. ಗೀತಾ ಸೀತಾರಾಮ್ ರವರ 12 ಸ್ವಂತ ತಿಲ್ಲಾನಗಳ ಗುಚ್ಛ. ಅಪರೂಪದ ರಾಗಗಳಾದ ಸರ್ವಶ್ರೀ, ಮಹತಿ, ಲವಂಗಿ, ವಾಸಂತಿ ಮತ್ತು ಜನರಂಜನಿ; ಹಿಂದೂಸ್ತಾನಿ ರಾಗಗಳಾದ ಸಿಂಧುಭೈರವಿ, ಬಹಾರ್, ದ್ವಿಜಾವಂತಿ, ಬೃಂದಾವನಿ ಮತ್ತು ತಿಲಂಗ್ ಇವುಗಳನ್ನು ತಿಲ್ಲಾನಗಳಿಗೆ ಬಳಸಲಾಗಿದೆ. ಸ್ವಂತ ರಾಗ ‘ಜಯಸಿಂಹ’ದಲ್ಲಿ ಒಂದು ತಿಲ್ಲಾನವಿದೆ. ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿವೆ.

ಗೀತ ರಶ್ಮಿ (2006): ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ಈ ಧ್ವನಿಸುರುಳಿಯಲ್ಲಿ 23 ರಚನೆಗಳಿವೆ. ಡಾ. ಗೀತಾ ಸೀತಾರಾಮ್ ರವರ ಈ ಸಂಕಲನದ ಮುಖ್ಯಾಂಶಗಳು: ರಾಗಮಾಲಿಕಾ ಸಂಪೂರ್ಣ ರಾಮಾಯಣ ಶಬ್ದಂ; ಕಾಳಿಂಗಮರ್ಧನ ಕೃಷ್ಣನನ್ನು ಕುರಿತ ವಿವಿಧ ನಡೆಗಳುಳ್ಳ ಪದವರ್ಣ; ದಿವ್ಯತ್ರಯರನ್ನು ಕುರಿತು ರಚನೆಗಳು; ಕೃತಿಗಳು ಮತ್ತು ತಿಲ್ಲಾನಗಳು. ಡಾ|| ಗೀತಾ ರವರ ಸ್ವಂತ ರಾಗ ‘ದೀಪದರ್ಶಿನಿ’ಯಲ್ಲಿ ಒಂದು ತಮಿಳು ಪದಂ. ರಚನೆಗಳು ಸಂಸ್ಕೃತ, ಕನ್ನಡ ಮತ್ತು ತಮಿಳಿನಲ್ಲಿವೆ.

ಧನ್ಯ-ಹಿರಣ್ಮಯಿ-ಲಕ್ಷ್ಮಿ (2012): ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ಈ ಧ್ವನಿಸುರುಳಿಯಲ್ಲಿ ಡಾ. ಗೀತಾ ಸೀತಾರಾಮ್ ರವರ ಎಂಟು ಲಕ್ಷ್ಮೀಪರ ರಚನೆಗಳಿವೆ. ಬೇಹಾಗ್ ನಲ್ಲಿ ಶ್ಲೋಕ, ಸ್ವರಜತಿ; ಸುಮನಸರಂಜನಿ ಮತ್ತು ತಿಲಂಗ್ ರಾಗದ ಕೃತಿಗಳು, ರೀತಿಗೌಳದ ಪದವರ್ಣ, ಕೀರವಾಣಿಯ ಕೀರ್ತನೆ, ದೀಪದರ್ಶಿನಿಯ ಭಾವಗೀತೆ ಮತ್ತು ರೇವತಿ ತಿಲ್ಲಾನ ಈ ಧ್ವನಿಸುರುಳಿಯ ವೈಶಿಷ್ಟ್ಯಗಳು.

ವಂದನೆ ಅಭಿವಂದನೆ (2014): ಸಂತರು ಮತ್ತು ವಾಗ್ಗೇಯಕಾರರನ್ನು ಕುರಿತಾದ ಹದಿನಾರು ರಚನೆಗಳು ಇಲ್ಲಿವೆ. ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ಈ ಧ್ವನಿಸುರುಳಿಯಲ್ಲಿನ ರಚನೆಗಳು ಸಂಸ್ಕೃತ, ಕನ್ನಡ ಮತ್ತು ತಮಿಳಿನಲ್ಲಿವೆ. ತ್ಯಾಗರಾಜ, ಮುದ್ದುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳು, ಪುರಂದರದಾಸರು, ಸ್ವಾತಿ ತಿರುನಾಳರು, ಮುತ್ತಯ್ಯಭಾಗವತರು, ವೀಣೆ ಶೇಷಣ್ಣ, ವಾಸುದೇವಾಚಾರ್ಯ, ಬಿಡಾರಂ ಕೃಷ್ಣಪ್ಪ, ಮೈಸೂರು ಸದಾಶಿವರಾಯರು, ಚೌಡಯ್ಯ, ಜಯಚಾಮರಾಜ ಒಡೆಯರ್, ಪಾಪನಾಶಂ ಶಿವನ್, ಎಂ.ಎಸ್.ಸುಬ್ಬಲಕ್ಷ್ಮಿ, ಲಾಲ್ಗುಡಿ ಜಯರಾಮನ್ ಹಾಗೂ ಡಾ.ಬಾಲಮುರಳಿಕೃಷ್ಣ ಇವರನ್ನು ಕುರಿತಾದ ಡಾ. ಗೀತಾ ಸೀತಾರಾಮ್ ರವರ ಸ್ವಂತ ರಚನೆಗಳ ಸಂಕಲನವಿದು.

ವಸಂತಗೀತ (2008): ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ಈ ಧ್ವನಿಸುರುಳಿಯಲ್ಲಿ ಮಕ್ಕಳಿಗಾಗಿ ಹಾಡಿರುವ 27 ರಚನೆಗಳಿವೆ. ಹಬ್ಬದ ಹಾಡುಗಳು, ದೇಶಭಕ್ತಿ ಗೀತೆಗಳು, ನಾಡಗೀತೆ, ದೇವರನಾಮಗಳು, ಭಾವಗೀತೆ, ಕೃತಿಗಳು ಹೀಗೆ ವೈವಿಧ್ಯಮಯ ಪುಟ್ಟ ಪುಟ್ಟ ರಚನೆಗಳನ್ನು ಆಯ್ದು, ಐದು ವರ್ಷದ ಮಕ್ಕಳೂ ಸುಲಭವಾಗಿ ಅನುಕರಣೆ ಮಾಡುವಂತೆ ಮಾಡಲಾಗಿದೆ.

ಸಿರಿನೋಂಪಿ (2009): ಧ್ವನಿಸುರುಳಿ; ಶ್ರೀ ಆಂಡಾಳ್ ರಚಿತ ತಿರುಪ್ಪಾವೈ ಪ್ರಬಂಧದ ಕನ್ನಡ ಪದ್ಯರೂಪ. ಇದರ ಸಾಹಿತ್ಯ ರಚನೆ ದಿವಂಗತ ವಾಚಪೇಯಂ ಶ್ರೀರಂಗಾಚಾರ್ಯರದು. ಸಂಗೀತ ಸಂಯೋಜನೆ ಹಾಗೂ ಗಾಯನ ಮಾಡಿರುವವರು ಡಾ. ಗೀತಾ ಸೀತಾರಾಮ್. ಇದನ್ನು ಪ್ರಕಟ ಮಾಡಿರುವವರು ಡಾ.ವಾಜಪೇಯಂ ಎಸ್.ಶ್ರೀನಿವಾಸನ್.

ಅರವಿಂದ ಪುಷ್ಪಮಾಲಾ ಭಾಗ-2 (2016): ಧ್ವನಿಸುರುಳಿ; ಶ್ರೀಮತಿ ಎಲ್.ಎಸ್.ಇಂದಿರಾಬಾಯಿ ಶೇಷಗಿರಿರಾವ್ ರವರ ರಚನೆಯ ಭಕ್ತಿ ಕೀರ್ತನೆಗಳು. ಈ ಭಾಗ ಎರಡರ ಸಂಗೀತ ಸಂಯೋಜನೆ ಹಾಗೂ ಗಾಯನವನ್ನು ಡಾ. ಗೀತಾ ಸೀತಾರಾಮ್ ರವರು ಮಾಡಿದ್ದಾರೆ. ಇದನ್ನು ಪ್ರಕಟಿಸಿರುವವರು ಶ್ರೀಮತಿ ಎಲ್.ಎಸ್.ಮಧುರಾ. ಇದರಲ್ಲಿ ಇಪ್ಪತ್ತು ಭಕ್ತಿಗೀತೆಗಳಿವೆ.

ತ್ಯಾಗರಾಜ ಗೀತಾಮೃತ (2018): ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ಈ ಧ್ವನಿಸುರುಳಿಯಲ್ಲಿ ಡಾ. ಗೀತಾ ಸೀತಾರಾಮ್ ರವರು ರಚಿಸಿ ಹಾಡಿರುವ 28 ಕೃತಿಗಳಿವೆ. ಇವು ತ್ಯಾಗರಾಜ ಕೃತಿಗಳ ಕನ್ನಡರೂಪ. ಡಾ.ಗೀತಾರವರು ತ್ಯಾಗರಾಜ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ಅದೇ ರಾಗ ತಾಳಗಳಲ್ಲಿ ಸ್ವತಃ ಹಾಡಿದ್ದಾರೆ.

ನಾದಬ್ರಹ್ಮ ರಚನಾಮೃತ ಭಾಗ-1 (2015) ಭಾಗ-2 (2018): ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ಈ ಕಿರುಹೊತ್ತಿಗೆಗಳಲ್ಲಿ ಡಾ. ಗೀತಾ ಸೀತಾರಾಮ್ ರವರು ಕನ್ನಡಕ್ಕೆ ಅನುವಾದಿಸಿರುವ ನೂರು [ಐವತ್ತು (ಭಾಗ-1), ಐವತ್ತು (ಭಾಗ-2)] ತ್ಯಾಗರಾಜ ಕೃತಿಗಳಿವೆ. ಮೂಲಕೃತಿಗಳ ಅದೇ ರಾಗ-ತಾಳಗಳಲ್ಲಿ ಈ ಕನ್ನಡರೂಪದ ಕೃತಿಗಳನ್ನು ಹಾಡಬಹುದು.

ಸಾಹಿತ್ಯಕ ಪ್ರಕಟಣೆಗಳು

ಬೇಲಿ (1984): ಇದು ಡಾ. ಗೀತಾ ಸೀತಾರಾಮ್ ರವರ ಪ್ರಥಮ ಕಾದಂಬರಿ. ಜ್ಯೋತಿಷ್ಶಾಸ್ತ್ರ ಹಾಗೂ ಮನಶ್ಶಾಸ್ತ್ರಗಳು ಒಬ್ಬ ಹೆಣ್ಣಿನ ವ್ಯಕ್ತಿತ್ವದ ಮೇಲೆ ಹಾಗೂ ಅವಳ ಸುತ್ತಲಿನವರ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ಈ ಕಾದಂಬರಿ ಚಿತ್ರಿಸುತ್ತದೆ. ನಂಜನಗೂಡಿನ ಒಡನಾಡಿ ಪ್ರಕಾಶನದವರು ಇದರ ಪ್ರಕಾಶಕರು.

ನೆಳಲು (2010, 2016): ಇದು ಡಾ. ಗೀತಾ ಸೀತಾರಾಮ್ ರವರ ಕಾದಂಬರಿ ಸಂಕಲನ. ಬೇಲಿ, ಆಸರೆ, ನಾಕುತಂತಿ, ನೆಳಲು ಈ ನಾಲ್ಕು ಕಾದಂಬರಿಗಳನ್ನು ಒಂದೇ ಹೊದಿಕೆಯಲ್ಲಿ ತರುವ ಪ್ರಯತ್ನವಿದು. ಶಿಲ್ಪ-ಕಲಾರ ವಿದ್ಯಾರ್ಥಿ ಜೀವನ ಅನುಭವಗಳ ಸಾರ ಆಸರೆಯಾದರೆ, ಗುರು-ಶಿಷ್ಯರಾದ ಸುಧೀಂದ್ರ-ಮೃದುಲಾರ ಪ್ರೀತಿಯ ಸಂಕೋಲೆ ನಾಕುತಂತಿ, ನೇಹಾಳ ಬದುಕಿನ ಸುತ್ತ ಹೆಣೆದ ಕಾದಂಬರಿ ನೆಳಲು. ಹೇಗೆ ಒಬ್ಬ ಹೆಣ್ಣು ಎಲ್ಲರಿಗೂ ಹೇಗೆ ತಂಪಾದ ನೆಳಲಾಗಬಲ್ಲಳು ಎಂಬುದನ್ನು ಚಿತ್ರಿಸುವ ಕಾದಂಬರಿ ಇದು. ಇದರ ಪ್ರಕಾಶಕರು ಸ್ವಾತಿ ಪ್ರಕಾಶನ, ಮೈಸೂರು. ಬೇಲಿ ‘ಸಂಯುಕ್ತ ಕರ್ನಾಟಕ’ ಮತ್ತು ಆಸರೆ ‘ಕನ್ನಡಪ್ರಭ’ದಲ್ಲಿ ದೈನಿಕ ಧಾರಾವಾಹಿಗಳಾಗಿ, ನಾಕುತಂತಿ ‘ರಾಗಸಂಗಮ’ ಪತ್ರಿಕೆಯಲ್ಲಿ ಹಾಗೂ ನೆಳಲು ‘ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟವಾದ ಕಾದಂಬರಿಗಳು.

ಸಾಸಿವೆಯಲ್ಲಿ ಸಾಗರ (2013): ಪಾಂಚಜನ್ಯ ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಕಿರು ಕಥಾಸಂಕಲನದಲ್ಲಿ 200 ಕಿರುಕಥೆಗಳಿವೆ. ಹಿರಿದಾದ ವಿಚಾರಗಳನ್ನೂ, ಸಂದೇಶಗಳನ್ನೂ, ಕಿರಿದಾದ ಕಥೆಗಳ ಮೂಲಕ ತಿಳಿಸುವುದು ಇದರ ಉದ್ದೇಶ. ಡಾ. ಗೀತಾ ಸೀತಾರಾಮ್ ರವರು ಅರ್ಧ ಪುಟದ ಕಥೆಗಳು ವ್ಯವಧಾನವಿಲ್ಲದ ಓದುಗರಿಗೆ ಅಪ್ಯಾಯಮಾನವಾಗಿವೆ.

ಅಂಗೈಯಲ್ಲಿ ಆಗಸ (2015): ಈ ಕಿರು ಕಥಾಸಂಕಲನ ಬೆಂಗಳೂರಿನ ಪಾಂಚಜನ್ಯ ಪಬ್ಲಿಕೇಷನ್ಸ್ ರವರ ಪ್ರಕಟಣೆ. ಇದರಲ್ಲಿ ಡಾ. ಗೀತಾ ಸೀತಾರಾಮ್ ರವರ ಅರ್ಥಪೂರ್ಣವಾದ 251 ಕಿರುಕಥೆಗಳಿವೆ. ಸಮಯವಿಲ್ಲದ ಓದುಗರಿಗೆ ಇದು, ಚಿಕ್ಕ ಅಂಗೈಯಲ್ಲಿ ಆಗಸದಷ್ಟು ಹಿರಿದಾದ ಸಂದೇಶಗಳನ್ನು ತಲುಪಿಸುತ್ತದೆ.

ಕನಸು ಕಂಡ ಚೋಳರಸ ಪಾರ್ತಿಬ (2016): ಡಾ.ಗೀತಾ ಸೀತಾರಾಮ್ ರವರ ಈ ಐತಿಹಾಸಿಕ ಕಾದಂಬರಿಯ

ತಮಿಳು ಮೂಲ ‘ಕಲ್ಕಿ’ಯವರ ‘ಪಾರ್ತಿಬನ್ ಕನವ್’. ಐವತ್ತು ವರ್ಷಗಳ ಹಿಂದಿನ ಈ ಜನಪ್ರಿಯ ತಮಿಳು ಕಾದಂಬರಿಯನ್ನು ಯಥಾವತ್ತಾಗಿ ಕನ್ನಡಿಸಿದ್ದಾರೆ ಡಾ. ಗೀತಾ ಸೀತಾರಾಮ್. ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು ಇದನ್ನು ಪ್ರಕಟಿಸಿದ್ದಾರೆ. ಚೋಳ-ಪಾಂಡ್ಯ ರಾಜಮನೆತನಗಳ ನಡುವಿನ ಈ ರೋಚಕ ಕಥಾನಕ 362 ಪುಟಗಳ ಸುಧೀರ್ಘ ಕಾದಂಬರಿ.

ಶಾಪ (2016): ಇದು ಡಾ. ಗೀತಾ ಸೀತಾರಾಮ್ ರವರ ಅನುವಾದಿತ ನಾಟಕ. ಟಿ.ಪಿ.ಕೈಲಾಸಂ ರವರ ಆಂಗ್ಲ ನಾಟಕ ‘ದ ಬ್ರಾಹ್ಮಿನ್ಸ್ ಕರ್ಸ್’ನ ಈ ಅನುವಾದವನ್ನು ಬೆಂಗಳೂರಿನ ಸ್ವರ ಪ್ರಿಂಟ್ ಅಂಡ್ ಪಬ್ಲಿಷರ್ಸ್ ಪ್ರಕಟಿಸಿದ್ದಾರೆ. ‘ವಿಕ್ಟೋರಿಯನ್ ಇಂಗ್ಲಿಷ್’ ಎನಿಸಿಕೊಂಡ ಕ್ಲಿಷ್ಠವಾದ ಆಂಗ್ಲಭಾಷೆಯ ಐದು ಅಂಕಗಳ ಈ ನಾಟಕವನ್ನು ಕನ್ನಡಿಸುವ ಸಾಹಸವನ್ನು ಡಾ. ಗೀತಾ ಸೀತಾರಾಮ್ ರವರು ಕೈಗೊಂಡಿದ್ದಾರೆ. ಕರ್ಣನ ದುರಂತಕ್ಕೆ ಕಾರಣವಾದ ಪರಶುರಾಮರ ಶಾಪದ ಸುತ್ತ ಹೆಣೆಯಲ್ಪಟ್ಟಿರುವ ಈ ನಾಟಕ ಓದುಗರ ಹೃದಯ ತಟ್ಟುವುದರಲ್ಲಿ ಸಂದೇಹವಿಲ್ಲ.

ಕಡಲು (1994, 2011): 1994ರ ಪ್ರಥಮ ಮುದ್ರಣದಲ್ಲಿ ಹದಿನೇಳು ಕಥೆಗಳಿವೆ. 2011ರ ಪರಿಷ್ಕೃತ ಮುದ್ರಣದಲ್ಲಿ 22 ಕಥೆಗಳಿವೆ. ಈ ಕಥಾಸಂಕಲನ ಡಾ. ಗೀತಾ ಸೀತಾರಾಮ್ ರವರ ಪ್ರಥಮ ಕಥಾಸಂಕಲನ. ‘ಸಾಹಿತ್ಯ ಸುಗ್ಗಿ’ ಪ್ರಕಾಶನ, ಬೆಂಗಳೂರು ಪ್ರಕಟಿಸಿರುವ ಈ ಕಥಾಸಂಕಲನದಲ್ಲಿರುವ ಅನೇಕ ಕಥೆಗಳಿಗೆ ಸ್ಪರ್ಧೆಯಲ್ಲಿ ಬಹುಮಾನಗಳು ಲಭಿಸಿವೆ. ಹೆಚ್ಚಿನವು ಕರ್ನಾಟಕದ ಪ್ರಸಿದ್ಧ ವಾರ, ಮಾಸ, ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಡಲಿನಲ್ಲಿ ದೊರೆಯುವ ಅಮೂಲ್ಯ ಮುತ್ತು ಮಾಣಿಕ್ಯಗಳು, ಓದುಗರಿಗೆ ಈ ಅನುಭವದ ಕಡಲಿನಲ್ಲೂ ದೊರೆಯುವುದು.

ರಂಗದರ್ಶನ: ಎರಡು ರೂಪಕಗಳು (2004): ಮಹಾರಾಜ ಸ್ವಾತಿ ತಿರುನಾಳ್ ಹಾಗೂ ಖ್ಯಾತ ಪಿಟೀಲುವಾದಕ ಟಿ.ಚೌಡಯ್ಯ ಈ ಇಬ್ಬರು ವಾಗ್ಗೇಯಕಾರರ ಜೀವನ-ಸಾಧನೆಗಳ ಆಧಾರಿತ ಎರಡು ಸಪ್ತಾಂಕ ನಾಟಕಗಳ ‘ರಂಗದರ್ಶನ’, ಈ ಕಿರುಹೊತ್ತಿಗೆಯಲ್ಲಿ ಡಾ. ಗೀತಾ ಸೀತಾರಾಮ್ ರವರು ನೀಡಿದ್ದಾರೆ. ಇವೆರಡೂ ಸಂಗೀತ-ನೃತ್ಯರೂಪಕಗಳಾಗಿ ರಂಗದ ಮೇಲೆ ಪ್ರದರ್ಶಿಸಲು ಸೂಕ್ತವಾಗಿವೆ. ಸ್ವಾತಿ ಪ್ರಕಾಶನ, ಮೈಸೂರು ಇದನ್ನು ಪ್ರಕಟಿಸಿದೆ.

ಗೀತಲಹರಿ (2004): ಇದು ಡಾ. ಗೀತಾ ಸೀತಾರಾಮ್ ರವರ ಹಾಸ್ಯ ಬರಹಗಳ ಪ್ರಥಮ ಸಂಕಲನ. ಸ್ವಾತಿ ಪ್ರಕಾಶನ, ಮೈಸೂರು ಪ್ರಕಟಿಸಿರುವ ಈ ಕಿರುಹೊತ್ತಿಗೆಯಲ್ಲಿರುವ ಲೇಖನಗಳು, ಲಘು ಹರಟೆಗಳು, ಲಲಿತಪ್ರಬಂಧಗಳು, ಕರ್ನಾಟಕದ ಪ್ರಸಿದ್ಧ ದಿನ-ವಾರ-ಮಾಸ ಪತ್ರಿಕೆಗಳಲ್ಲಿ ಪ್ರಕಟವಾದವು; ಬಹುಮಾನಿತ ಬರಹಗಳೂ ಇವೆ.

ಸಪ್ತಸ್ವರ: ಕಿರು ಕಾದಂಬರಿ (2011): ಡಾ. ಗೀತಾ ಸೀತಾರಾಮ್ ರವರ ಈ ಕಿರು ಕಾದಂಬರಿ ಮೊದಲು ‘ವನಿತಾ’ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಏಳು ಜನ ವನಿತೆಯರ ಜೀವನ, ಅವರು ಸಮಾಜಕ್ಕೆ ನೀಡುವ ಸಂದೇಶವೇ ಈ ಕಾದಂಬರಿಯ ಕಥಾವಸ್ತು. ಈ ಏಳು ವನಿತೆಯರ ಜೀವನದ ಏಳು-ಬೀಳುಗಳನ್ನು ಲೇಖಕಿ ಸಂಗೀತದ ಸಪ್ತಸ್ವರಗಳಿಗೆ ಹೋಲಿಸಿದ್ದಾರೆ. ಜಾಗೃತಿ ಪ್ರಿಂಟರ್ಸ್, ಬೆಂಗಳೂರು ಪ್ರಕಟಿಸಿರುವ ಈ ಕಿರು ಕಾದಂಬರಿಗೆ ‘ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ’ ದೊರೆತಿದೆ.

ಭೀಷ್ಮ/ಊರ್ಮಿಳಾ (1996): ಮಹಾಭಾರತ ಹಾಗೂ ರಾಮಾಯಣ ಪಾತ್ರಗಳನ್ನು ಆಧರಿಸಿದ ಡಾ. ಗೀತಾ ಸೀತಾರಾಮ್ ರವರ ಎರಡು ನಾಟಕಗಳನ್ನು ಸ್ವಾತಿ ಪ್ರಕಾಶನ, ಮೈಸೂರು ಒಂದೇ ಹೊದಿಕೆಯಲ್ಲಿ ಪ್ರಕಟಿಸಿದೆ. ಇದಕ್ಕೆ ಮೊದಲು ಇವು ಆಕಾಶವಾಣಿ, ಮೈಸೂರಿನಿಂದ ಬಾನುಲಿ ಪ್ರಸಾರ ಕಂಡಿವೆ. ‘ಭೀಷ್ಮ’ ಸಪ್ತಾಂಕ ನಾಟಕವಾದರೆ, ‘ಊರ್ಮಿಳಾ’ದಲ್ಲಿ ನಾಲ್ಕು ಅಂಕಗಳಿವೆ. ಎರಡು ಭಿನ್ನ ರೀತಿಯ ತ್ಯಾಗಗಳನ್ನು ಚಿತ್ರಿಸುವ ಈ ಎರಡೂ ನಾಟಕಗಳು ರಂಗಪ್ರದರ್ಶನಕ್ಕೆ ಯೋಗ್ಯವಾಗಿವೆ.

ಜನನಿ (2008): ಡಾ.ಗೀತಾ ಸೀತಾರಾಮ್ ಸಂಪಾದಿಸಿರುವ ಈ ಪುಸ್ತಕ ಕನ್ನಡ ಮತ್ತು ಇಂಗ್ಲೀಷ್ ಲೇಖನಗಳನ್ನೊಳಗೊಂಡಿದೆ. ‘ತಾಯಿ’ ಎಂಬ ವಸ್ತುವಿನ ಸುತ್ತ ಹೆಣೆದಿರುವ ಈ ಲೇಖನಗಳು, ಪದ್ಯಗಳು ಹೃದಯಸ್ಪರ್ಶಿಯಾಗಿವೆ. ಸ್ವಾತಿ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದಲ್ಲಿ, ಪ್ರಖ್ಯಾತ ಲೇಖಕರಾದ ಸರ್ವಶ್ರೀಯುತ ದೇಜಗೌ, ಎಚ್ಚೆಸ್ಕೆ, ನಿಸಾರ್ ಅಹಮದ್, ಚಿದಾನಂದಗೌಡ, ತಾರಿಣಿ ಚಿದಾನಂದ, ಗೌರಮ್ಮ ಶ್ರೀನಿವಾಸಮೂರ್ತಿ, ಈಶ್ವರ ದೈತೋಟ, ಗೀತಾ ಕೃಷ್ಣಮೂರ್ತಿ, ಸಂಧ್ಯಾ ಪೈ, ರಮಾ ಬೆಣ್ಣೂರ್, ಕೃ.ರಾಮಚಂದ್ರ, ಶ್ರೀವತ್ಸ ಕಲ್ಬಾಗಲ್, ಅರವಿಂದಮೂರ್ತಿ, ಖಾದ್ರಿ ಪಾಚು, ಖಾದ್ರಿ ಶಾಂತ, ಗೀತಾ ಶ್ರೀನಿವಾಸ್, ಗೊರೂರು ಶ್ರೀನಿವಾಸಮೂರ್ತಿ, ಬಿ.ಚನ್ನಕೇಶವ, ಏ.ಎಸ್.ಚಂದ್ರಮೌಳಿ, ತುಳಸಿರಾಮಚಂದ್ರ, ಹೆಚ್.ಆರ್.ಎನ್.ಮೂರ್ತಿ, ರಂಗಮಣಿ ರಾಜನ್, ರಂಗನಾಥ್.ಬಿ.ಕೆ, ಲಿಲ್ಲಿ ಆಚಾರ್, ವಿದ್ಯಾಮೂರ್ತಿ, ವಸಂತ ಕಲ್ಬಾಗಲ್, ವೇದವತಿ, ವಿನೋದ ರವಿ, ಪುಷ್ಪ ಶೇಷಾದ್ರಿ ಮತ್ತು ಗೀತಾ ಸೀತಾರಾಮ್ ಇವರ ಕನ್ನಡ ಲೇಖನಗಳಿವೆ. ಇದಲ್ಲದೆ ಆಂಗ್ಲ ಭಾಷೆಯಲ್ಲೂ ಲೇಖನಗಳು, ಪದ್ಯಗಳಿವೆ.

ಮಹಾಮಾತೆ ಶ್ರೀ ಶಾರದಾದೇವಿ (1997): ಶಾರದಾ ಶಾಂತಿ ಆಶ್ರಮ, ಬೆಂಗಳೂರು ಏರ್ಪಡಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಡಾ. ಗೀತಾ ಸೀತಾರಾಮ್ ರವರ ಈ ಪ್ರಬಂಧವನ್ನು ಆಶ್ರಮದವರೇ ಒಂದು ಕಿರುಹೊತ್ತಿಗೆಯಾಗಿ ಪ್ರಕಟಿಸಿದ್ದಾರೆ. ಇಂದು ಶ್ರೀಮಾತೆಯವರ ಜೀವನ-ಸಂದೇಶಗಳ ಪ್ರಸ್ತುತತೆ ಎಂಬ ವಿಷಯದ ಈ ಪ್ರಬಂಧದಲ್ಲಿ ಡಾ.ಗೀತಾರವರ ಶೈಲಿ ಸರಳ, ಸುಂದರ, ಧೀರ, ಗಂಭೀರ.

ಸಂಬಂಧಮಾಲೆ (2009): ಡಾ.ಗೀತಾ ಸೀತಾರಾಮ್ ಸಂಪಾದಿಸಿರುವ ಈ ಕವನಗುಚ್ಛದಲ್ಲಿ ಜನುಮದಿನ, ಮದುವೆ, ಮದುವೆಯ ವರ್ಷಾಚರಣೆ, ಗೃಹಪ್ರವೇಶ, ಪುಸ್ತಕ ಬಿಡುಗಡೆ, ಬೀಳ್ಕೊಡುಗೆ, ಅಂತಿಮಯಾತ್ರೆ, ಹಬ್ಬಗಳು, ವಿವಿಧ ಸಂದರ್ಭಗಳಲ್ಲಿ ಅನೇಕ ಬರಹಗಾರರು ರಚಿಸಿರುವ ಕವನಗಳಿವೆ. ಸ್ವಾತಿ ಪ್ರಕಾಶನ, ಮೈಸೂರು ಇದನ್ನು ಪ್ರಕಟಿಸಿದೆ. ಪದ್ಯಗಳು ಕನ್ನಡ ಮತ್ತು ಇಂಗ್ಲೀಷ್ನಲ್ಲಿವೆ.

ಪುಸ್ತಕ ನಿಮಗೆಷ್ಟು ಗೊತ್ತು? (1992): ತ್ರಿವೇಣಿ ಪಬ್ಲಿಕೇಷನ್ಸ್, ಮೈಸೂರು ಪ್ರಕಟಿಸಿರುವ ಶಿಶುಸಾಹಿತ್ಯದ ಗುಂಪಿಗೆ ಸೇರುವ ಈ ಕಿರುಹೊತ್ತಿಗೆಯಲ್ಲಿ ಪುಸ್ತಕದ ಹುಟ್ಟು, ಬೆಳವಣಿಗೆ, ಅದರ ಬಾಹ್ಯರೂಪ, ಪ್ರಕಾಶನದ ಹಂತಗಳು, ಪುಸ್ತಕದ ರಕ್ಷಣೆ, ಪುಸ್ತಕದ ನವೀನರೂಪಗಳು ಇವುಗಳನ್ನು ಸರಳ ನುಡಿಗಳಲ್ಲಿ ಹೇಳಿದ್ದಾರೆ.

ಕರ್ನಾಟಕದ ಸಂಗೀತ ನಡೆದು ಬಂದ ದಾರಿ (1992): ಡಾ.ಗೀತಾ ಬರೆದಿರುವ ಈ ಸರಳ ಭಾಷೆಯ ಪುಸ್ತಕ ಶಿಶುಸಾಹಿತ್ಯದ ಪ್ರಕಾರಕ್ಕೆ ಸೇರುತ್ತದೆ. ತ್ರಿವೇಣಿ ಪಬ್ಲಿಕೇಷನ್ಸ್, ಮೈಸೂರು ಪ್ರಕಟಿಸಿರುವ ಈ ಕಿರುಹೊತ್ತಿಗೆಯಲ್ಲಿ ಕರ್ನಾಟಕದ ಸಂಗೀತ ನಡೆದು ಬಂದ ದಾರಿಯನ್ನು ಚಿತ್ರಿಸಲಾಗಿದೆ. ವೇದಗಳ ಕಾಲಕ್ಕೆ ಸರಿಯುವ ಸಂಗೀತದ ಮೂಲವನ್ನು ಸಪ್ತಸ್ವರಗಳನ್ನು ಪ್ರಾಣಿಗಳ ಕೂಗಿಗೆ ಹೋಲುವುದನ್ನೂ, ಭಾರತೀಯ ಸಂಗೀತದ ವೈಶಿಷ್ಟ್ಯ, ಮೈಲಿಗಲ್ಲುಗಳು, ಉತ್ತರಾದಿ ದಕ್ಷಿಣಾದಿ ಸಂಗೀತಗಳು, ಕರ್ನಾಟಕ ಸಂಗೀತದ ಅಭಿವೃದ್ಧಿ, ಹತ್ತೊಂಭತ್ತನೆಯ ಶತಮಾನದ ಸಂಗೀತ ರತ್ನಗಳು, ಮೈಸೂರು ಅರಸರ ಕೊಡುಗೆ, ಇಪ್ಪತ್ತನೆಯ ಇಪ್ಪತೊಂದನೆಯ ಶತಮಾನದ ಸಾಹಸಗಳನ್ನು ಚಿತ್ರಿಸುತ್ತಾರೆ ಲೇಖಕಿ.

ವಾಷಿಂಗ್ಟನ್ನಲ್ಲಿ ವಿವಾಹ (2018): ‘ಆನಂದ ವಿಕಟನ್’ ಎಂಬ ತಮಿಳು ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಚಾ.ವಿಶ್ವನಾಥನ್ (ಚಾವಿ) ರಚಿಸಿರುವ ಜನಪ್ರಿಯ ತಮಿಳು ಹಾಸ್ಯ ಕಾದಂಬರಿ ‘ವಾಷಿಂಗ್ಟನ್ನಿಲ್ ತಿರುಮಣಂ’ ಡಾ.ಗೀತಾ ಸೀತಾರಾಮ್ರವರ ಲೇಖನಿಯಲ್ಲಿ ‘ವಾಷಿಂಗ್ಟನ್ನಲ್ಲಿ ವಿವಾಹ’ ಎಂಬ ಹಾಸ್ಯ ಕಾದಂಬರಿಯಾಗಿ ಮೂಡಿಬಂದಿದೆ. ಇದನ್ನು ಪಾಂಚಜನ್ಯ ಪಬ್ಲಿಕೇಷನ್ಸ್, ಬೆಂಗಳೂರು ಪ್ರಕಟಿಸಿದೆ. 50 ವರ್ಷಗಳ ಹಿಂದೆ ಚಾವಿಯವರು ಚಿತ್ರಿಸಿದ ಅಮೆರಿಕದಲ್ಲಿ ಕಾಲ್ಕನಿಕವಾಗಿ ನಡೆದ ಈ ಭಾರತೀಯ ಮದುವೆಯ ಕಥಾನಕ ಗೋಪುಲುರವರ ಚಿತ್ರಗಳೊಂದಿಗೆ ಓದುಗರನ್ನು ರಂಜಿಸಿತು. ಅದನ್ನೇ ಇದೀಗ ಡಾ. ಗೀತಾ ಸೀತಾರಾಮ್ ರವರು ಕನ್ನಡ ಜನತೆಗೆ ಇತ್ತಿದ್ದಾರೆ.

ಬದುಕು ಪಾರಿಜಾತ (2020): ಡಾ.ಗೀತಾರವರು ಬರೆದ ಈ ಒಂಬತ್ತು ಕಥೆಗಳ ಕಥಾಸಂಕಲನದಲ್ಲಿ ಯಶೋಧರಾ, ಪಾರಿಜಾತ, ಪನ್ನಾ, ಸಂಧಾನವೋ-ಸಂಗ್ರಾಮವೋ?, ಗೆಜ್ಜೆಯ ಹೆಜ್ಜೆ, ದಾನ, ಮೌನದ ಚಿಪ್ಪು ಮುಂತಾದ ಪ್ರಕಟಿತ ಕಥೆಗಳೂ, ಹಲವು ಅಪ್ರಕಟಿತ ಕಥೆಗಳೂ ಇವೆ.

ರಾಜ ಕಲಾವಿದ (2018) (ಅಪ್ರಕಟಿತ): ಖ್ಯಾತ ಚಿತ್ರಕಾರ ರಾಜ ರವಿವರ್ಮರ ಜೀವನದ ಸುತ್ತ ಹೆಣೆದ ಕಾದಂಬರಿ.